ಸಂಗೊಳ್ಳಿ ರಾಯಣ್ಣ
	ಬ್ರಿಟಿಷರ ವಿರುದ್ಧ ಕಿತ್ತೂರಿನಲ್ಲಿ ನಡೆದ ದಂಗೆಯ ನೇತಾರ. ರಾಯಣ್ಣ ಕಿತ್ತೂರು ಸಂಸ್ಥಾನದ ಸಾಮಾನ್ಯ ಪ್ರಜೆ.  ಸಂಗೊಳ್ಳಿ ಗ್ರಾಮದ ತಳವಾರಿ. ಹಲವಾರು ದೇಶಬಾಂಧವರೊಡನೆ ಅಹೋರಾತ್ರಿ ಹೋರಾಡಿ ಇತರರಂತೆ ಕಾರಾಗೃಹವಾಸ ಅನುಭವಿಸಿ ಬಿಡುಗಡೆಯಾಗಿದ್ದ.  ಬ್ರಿಟಿಷರ ವಿರುದ್ಧ ಯುದ್ಧಮಾಡಿದ್ದರಿಂದ ಇವನ ವತನಭೂಮಿಯನ್ನೂ ಸರ್ಕಾರ ವಶಪಡಿಸಿಕೊಂಡಿತ್ತು. ಬ್ರಿಟಿಷರ ಈ ಕೃತ್ಯದಿಂದ ರಾಯಣ್ಣ ಕ್ರೋಧಗೊಂಡ. ಜೊತೆಗೆ ಕಿತ್ತೂರಿನ ಸ್ವಾತಂತ್ರ್ಯ ವನ್ನು ಪುನಃ ಸ್ಥಾಪಿಸುವ ಉದಾತ್ತ ಧ್ಯೇಯ ಇವನ ದೇಶಾಭಿಮಾನವನ್ನು ಮತ್ತೊಮ್ಮೆ ಬಡಿದೆಬ್ಬಿಸಿತು. ಬ್ರಿಟಿಷರ ವಿರುದ್ಧ ಹೋರಾಡಲು ಶೂರಸಾಹ ಸಿಗಳ ಗುಂಪು ಕಟ್ಟಿಕೊಂಡು ಬಂಡಾಯವೆಬ್ಬಿಸಿ, ಚೆನ್ನಮ್ಮನ ದತ್ತುಪುತ್ರ ನಾದ ಶಿವಲಿಂಗಪ್ಪನನ್ನು ಕಿತ್ತೂರಿನ ಗದ್ದುಗೆಗೆ ಏರಿಸುವ ಸಾಹಸಕೃತ್ಯಕ್ಕೆ ಕೈಹಾಕಿದ.  ಕಿತ್ತೂರಿನಲ್ಲಿ ಬ್ರಿಟಿಷ್ ಸರ್ಕಾರದ ಇರವನ್ನು ಧಿಕ್ಕರಿಸುವ ಪ್ರಯತ್ನಮಾಡಿದ.  ಸೈನ್ಯಸಹಾಯವಿಲ್ಲದ ಕಾರಣ ಕೂಟಯುದ್ಧಕ್ಕಿಳಿದ.

	ಮೊದಲು ಖಾನಾಪುರದಲ್ಲಿ ನೆಲೆಸಿದ್ದ ಮೇಜರ್ ಪಿಕ್ಕರಿಂಗ್‍ನ ಸೈನ್ಯದ ಮೇಲೆ ದಾಳಿಮಾಡಿದ; ಅಲ್ಲಿಯ ಸರ್ಕಾರಿ ಕಚೇರಿಯನ್ನು ಸುಟ್ಟ. ಹಗಲು ಹೊತ್ತನ್ನು ಕಾಡಿನಲ್ಲಿ ಕಳೆದು, ರಾತ್ರಿ ವೇಳೆ ತನ್ನ ಅನೇಕ ಯೋಧರೊಡನೆ ಬ್ರಿಟಿಷರ ಠಾಣ್ಯಗಳ ಮೇಲೆ ಎರಗುತ್ತಿದ್ದ. ದಿನೇ ದಿನೇ ಇವನ ಸಹಚರರು ವರ್ಧಿಸುತ್ತಿದ್ದರು. ಸುಮಾರು ಇಡೀ ಕಿತ್ತೂರು ಸಂಸ್ಥಾನದ ಪ್ರಜೆಗಳೆಲ್ಲ ಇವನ ಬೆಂಬಲಿಗರಾಗಿದ್ದರು. ಮೋಸದಿಂದ ಬ್ರಿಟಿಷರ ಪಕ್ಷ ವಹಿಸುವವರನ್ನು ನಿರ್ದಾಕ್ಷಿಣ್ಯವಾಗಿ ಕೊನೆಗಾಣಿಸುತ್ತಿದ್ದ. ಇವನ ಕಾರ್ಯದಿಂದ ಬೆಚ್ಚಿದ ಬ್ರಿಟಿಷ್ ಅಧಿಕಾರಿ ಗಳು ರಕ್ಷಣೆಗಾಗಿ ಸೈನ್ಯಸಹಾಯ ಪಡೆಯಬೇಕಾಯಿತು. ಸರ್ಕಾರಿ ಅಧಿಕಾರಿಗಳು ಇವನನ್ನು ಹಿಡಿಯಲು ಬೆನ್ನುಹತ್ತಿದರೂ ಇವನು ನುಣುಚಿಕೊಳ್ಳುತ್ತಿದ್ದ. ಇವನು ಖಾನಾಪುರದಿಂದ ನಡೆದು ಅನಂತರ ಸಂಪಗಾಂವದ ಮೇಲೆ ದಾಳಿ ಮಾಡಿದ. ಅಲ್ಲಿನ ಖಜಾನೆಯನ್ನು ಸೂರೆಮಾಡಿ ಹಲವು ಹಳ್ಳಿಗಳ ಮೇಲೂ ಎರಗಿ ಧನಸಂಗ್ರಹಮಾಡಿ, ಬ್ರಿಟಿಷರ ನಿಗ್ರಹಕ್ಕೆ ಹಗಲಿರುಳೂ ಪ್ರಯತ್ನಿಸಿದ. ಈ ರೀತಿಯಾಗಿ ರಾಯಣ್ಣ ತನ್ನ ಕಾರ್ಯಗಳನ್ನು ನಾಲ್ಕು ತಿಂಗಳ ಕಾಲ ಅವ್ಯಾಹತವಾಗಿ ನಡೆಸಿದಾಗ, ಯುದ್ಧಮಾಡಿ ಇವನನ್ನು ಸೆರೆಹಿಡಿಯುವುದು ಅಸಾಧ್ಯವೆಂದು ಮನಗಂಡ ಬ್ರಿಟಿಷ್ ಸರ್ಕಾರ, ಕಪಟ ಜಾಲವೊಡ್ಡಿ, ದೇಶದ್ರೋಹಿಗಳ ಸಹಾಯದಿಂದ ರಾಯಣ್ಣನನ್ನು ಸೆರೆಹಿಡಿದು, ವಿಚಾರಣೆಗೊಳಪಡಿಸಿತು. ವಿಶೇಷ ನ್ಯಾಯಾಲಯ ಇವನನ್ನು ತಪ್ಪಿತಸ್ಥನೆಂದು ಘೋಷಿಸಿತು. ಇವನ ಕಾರ್ಯಕ್ಷೇತ್ರಗಳಲ್ಲಿ ಮುಖ್ಯವಾಗಿದ್ದ ನಂದಗಡದಲ್ಲಿ ಇವನನ್ನು 1829ರಲ್ಲಿ ಗಲ್ಲಿಗೇರಿಸಲಾಯಿತು.

	ಸಂಗೊಳ್ಳಿ ರಾಯಣ್ಣ ತನ್ನ ಕಾರ್ಯದಲ್ಲಿ ಸಫಲನಾಗದಿದ್ದರೂ ಬ್ರಿಟಿಷರ ಗುಲಾಮನಾಗಿ ಬಾಳುವುದಕ್ಕಿಂತ ಅವರೊಡನೆ ಹೋರಾಡಿ ವೀರಸ್ವರ್ಗವನ್ನು ಹೊಂದುವುದೇ ಮೇಲೆಂದು ಭಾವಿಸಿದ್ದವನು.  ಕಿತ್ತೂರಿನ ರಾಣಿ ಚೆನ್ನಮ್ಮನ ವೀರಕಥೆಯಂತೆ ಸಂಗೊಳ್ಳಿ ರಾಯಣ್ಣನ ದೇಶಾಭಿಮಾನವೂ ಹಲವು ಜನಪದ ಗೀತೆಗಳಿಗೆ ವಸ್ತುವಾಗಿದೆ.  ಸಂಗೊಳ್ಳಿ ರಾಯಣ್ಣನಿಗೆ ಸಂಬಂಧಿಸಿದ ಲಾವಣಿಯೊಂದನ್ನು ಜೆ.ಎಫ್. ಫ್ಲೀಟರು ಸಂಗ್ರಹಿಸಿದ್ದಾರೆ (1871-75).	        
   
            (ಜಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ